ಜನರಲ್ ಬಿಪೀನ್ ಲಕ್ಷ್ಮಣ್ ರಾವತ್!

Webee Cafe
ಜನರಲ್ ಬಿಪೀನ್ ಲಕ್ಷ್ಮಣ್ ರಾವತ್!

ಈ ಮೇರು ಶಕ್ತಿಯ ಹೆಸರೇ ಶತ್ರುಗಳಿಗೆ ಸಿಂಹ ಸ್ವಪ್ನ! ರಾಷ್ಟ್ರ ಪ್ರೇಮಿಗಳಿಗೆ ಸ್ಫೂರ್ತಿಯ ಚಿಲುಮೆ! ಪ್ರತೀ ಒಬ್ಬ ಸೈನಿಕನಿಗೂ ಒಂದು ದೊಡ್ಡ ಗೌರವದ ಸೆಲ್ಯೂಟ್! ಭಾರತೀಯ ಸೇನೆಗಳ ಸುವರ್ಣ ಪರಂಪರೆಗೆ ಒಂದು ಚಿನ್ನದ ಪ್ರಭಾವಳಿ! ಮುಂದೆ ಬರಲಿರುವ ಪ್ರತೀ ಒಬ್ಬ ಸೈನಿಕನಿಗೆ ಕೂಡ ಒಂದು ಅಧ್ಯಯನದ ವಿಷಯ!

ಅವರು ಬದುಕಿದ ರೀತಿಯೇ ಹಾಗಿತ್ತು. ಒಬ್ಬ ಸೈನಿಕ ನಿರಂತರ 43 ವರ್ಷಗಳ ಕಾಲ ಭಾರತೀಯ ಸೈನ್ಯದ ಸೇವೆಗೆ ಸಮರ್ಪಣೆ ಆದದ್ದೇ ಒಂದು ರೋಚಕವಾದ  ಅಧ್ಯಾಯ! 


1958 ಮಾರ್ಚ್ 16ರಂದು ಉತ್ತರಾಖಂಡ ರಾಜ್ಯದ ಪೌರಿ ಎಂಬ ಊರಲ್ಲಿ ಜನಿಸಿದ ಮೇಜರ್ ರಾವತ್ ಅವರು ಸ್ಫೂರ್ತಿಗಾಗಿ ಹೊರಗೆ ಹುಡುಕುವ ಪ್ರಸಂಗವೇ ಬರಲಿಲ್ಲ! 


ಏಕೆಂದರೆ ಅವರ ಮಧ್ಯಮ ವರ್ಗದ ಕುಟುಂಬದಲ್ಲಿ ಹಲವು ತಲೆಮಾರುಗಳಿಂದ ಸೈನಿಕರೇ ಇದ್ದರು! ಅವರ ತಂದೆ ಲೆಫ್ಟಿನೆಂಟ್ ಲಕ್ಷ್ಮಣ್ ಸಿಂಗ್ ರಾವತ್ ಅವರು ಕೂಡ ಒಬ್ಬ ಸೈನಿಕರು. ಮಗ ಕೂಡ ಭಾರತದ ಸೈನ್ಯಕ್ಕೆ  ಹೊರಟು ನಿಂತಾಗ ಅಪ್ಪ ತುಂಬಾ ಖುಷಿ ಪಟ್ಟರು. ಮಗ  ಸೇನಾ ಶಾಲೆಗೆ ಸೇರಿ  B.Sc, M. Phil ಮತ್ತು Ph.D ಎಲ್ಲವನ್ನೂ ಪೂರ್ತಿ ಮಾಡಿದ್ದು ಡಿಫೆನ್ಸ್ ಥೀಮಗಳ  ಮೇಲೆ. 


ಮುಂದೆ ಭಾರತೀಯ ಭೂಸೇನೆಗೆ ಒಬ್ಬ ಸಾಮಾನ್ಯ ಸೈನಿಕನಾಗಿ 1978ರಲ್ಲಿ ಸೇರಿದ ಜನರಲ್ ರಾವತ್ ಒಂದೊಂದೇ ಹೆಜ್ಜೆಯನ್ನು ಕೂಡ ಧೃಢವಾಗಿ ಇರಿಸುತ್ತ  ಮುನ್ನಡೆದರು. ಅದು ಕೂಡ ಅವರು ಸೇವೆ ಸಲ್ಲಿಸಿದ್ದು  '11 ಗೂರ್ಖಾ ರೈಫಲ್ಸ್' ಎಂಬ ತುಕುಡಿಯಲ್ಲಿ. ಅದರಲ್ಲಿ ಫೀಲ್ಡ್ ಮಾರ್ಷಲ್ ಮಾನೆಕ್ ಶಾ, ಜನರಲ್ ದಲ್ಬೀರ್ ಸಿಂಘ್ ಮೊದಲಾದ ಸಿಂಹಗಳು ಆಗಲೇ ಸೇವೆಯನ್ನು ಸಲ್ಲಿಸಿದ್ದರು. ರಾವತ್ ಅವರ ತಂದೆಯವರು ಕೂಡ ಅದೇ ರೆಜಿಮೆಂಟಲ್ಲಿ ಸೇವೆ ಸಲ್ಲಿಸಿದ ಇಮೋಷನ್ ಜೊತೆಗೆ ಇತ್ತು! 


ಮುಂದೆ ಜನರಲ್ ರಾವತ್ ಅವರು ಹಲವಾರು ಕ್ಲಿಷ್ಟ  ಯುದ್ಧಗಳನ್ನು ಮುಂದೆ ನಿಂತು ಗೆಲ್ಲಿಸಿದರು. 1987ರಲ್ಲಿ ಚೀನಾ ನಾಗರಿಕರ ದಂಗೆಯ ಹೆಸರಿನಲ್ಲಿ ಭಾರತದ ಮೇಲೆ ಎರಗಿ ಬಂದಾಗ ಭಾರತ ಚೀನಾ ಮ್ಯಾಕ್ಮಿಲನ್ ಗಡಿಯ ಉದ್ದಕ್ಕೂ ತನ್ನ ಸೈನಿಕರ ಜೊತೆಗೆ ಹೋರಾಡಿ ಗೆದ್ದು ಬಂದವರು ಇದೇ ರಾವತ್. ಕಾರ್ಗಿಲ್ ಯುದ್ಧದ ಗೆಲುವಿನಲ್ಲಿ ಇವರ ಕಾರ್ಯತಂತ್ರಗಳು ಭಾರತವನ್ನು ಗೆಲ್ಲಿಸಿದವು. ಮುಂದೆ ಹಲವು ಬಾರಿ ಸರಕಾರಗಳು ಮೈಮರೆತ ಸಂದರ್ಭದಲ್ಲಿ ಸೇನೆಯ ಪರವಾಗಿ ನಿಂತು ಅವರಿಗೆ ನೈತಿಕ ಬೆಂಬಲವನ್ನು ನೀಡಿದ್ದನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಮುಂದೆ ಅವರು ಭಾರತದ ಭೂಸೇನೆಯ ಮುಖ್ಯಸ್ಥರಾಗಿ ನಿವೃತ್ತ ಆದರು. 


ಆದರೆ ಆಗಲೇ ಭಾರತ ಸರಕಾರವು ಒಂದು ಗಟ್ಟಿ ತೀರ್ಮಾನಕ್ಕೆ ಬಂದಿತ್ತು. ಅದು ಕಾರ್ಗಿಲ್ ಯುದ್ಧ ಭಾರತಕ್ಕೆ ಕಲಿಸಿದ ಪಾಠ ಆಗಿತ್ತು. ಸ್ವಾತಂತ್ರ್ಯದ ನಂತರ ಭಾರತೀಯ ಸೇನೆಯು ಭೂಸೇನೆ, ವಾಯುಸೇನೆ, ನೌಕಾ ಸೇನೆ ಇವು ಮೂರು ಘಟಕಗಳು ಬೇರೆ ಬೇರೆ ಮುಖ್ಯಸ್ಥರನ್ನು ಹೊಂದಿದ್ದವು.


ಆದರೆ ಮೂರು ಸೇನಾ ಮುಖ್ಯಸ್ಥರ ನಡುವೆ ನಿರ್ವಹಣೆ ಮತ್ತು ಸಂವಹನದ ಕೊರತೆ ಇದ್ದೇ ಇತ್ತು. ಭಾರತದ  ಸರಕಾರ ಮತ್ತು ಸೇನೆಗಳ ನಡುವೆ ಸೌಹಾರ್ದ ಕೊಂಡಿ ಆಗಿ ಕಾರ್ಯ ನಿರ್ವಹಣೆ ಮಾಡುವ ಒಂದು ಅಧಿಕಾರಿ ಹುದ್ದೆ ಬೇಕಾಗಿತ್ತು. ಅದರಲ್ಲಿ ಕೂಡ ಬಿಕ್ಕಟ್ಟು ಮತ್ತು ಕ್ಷೋಭೇಗಳು ಎದುರಾದಾಗ ಕಠಿಣ ನಿರ್ಧಾರವನ್ನು ಕೈಗೊಳ್ಳುವ ಒಂದು ನಾಯಕತ್ವ ಬೇಕಾಗಿತ್ತು. ಅದರ ಜೊತೆಗೆ  ಭಾರತೀಯ ಸೇನೆಯನ್ನು ಆಧುನಿಕತೆಯ ಹಳಿಯಲ್ಲಿ ಮುಂದೆ ನಡೆಸಲು ಒಬ್ಬ ತಂತ್ರಜ್ಞಾನದ ಪರಿಣತ ಬೇಕಿತ್ತು.


ಇದನ್ನು ಮನಗಂಡ ಮೋದಿ ಸರಕಾರವು 2019ರ ಡಿಸೆಂಬರ್ ತಿಂಗಳಲ್ಲಿ ಚೀಫ್ ಡಿಫೆನ್ಸ್ ಸ್ಟಾಫ್ ( CDS) ಎಂಬ ಹುದ್ದೆಯನ್ನು ಸ್ಥಾಪನೆ ಮಾಡಿತು. ಪ್ರಧಾನಿ ಈ ಹುದ್ದೆಗೆ ಸಮರ್ಥ ಆದ ಒಬ್ಬ ಸಕ್ಷಮ ಸೇನಾನಿಯನ್ನು ಹುಡುಕಲು ತೊಡಗಿದಾಗ ತಟ್ಟನೆ ಸೆಳೆದದ್ದು ಜನರಲ್ ರಾವತ್ ಅವರ ಟ್ರಾಕ್ ರೆಕಾರ್ಡ್! ಮರುದಿನವೇ ರಕ್ಷಣಾ ಮಂತ್ರಿಯವರು ಪ್ರಧಾನಿಯವರ ಪತ್ರ ಹಿಡಿದು ರಾವತ್ ಮನೆಯ ಮುಂದೆ ಇದ್ದರು! 


ಭೂಸೇನೆಯ ಮುಖ್ಯಸ್ಥರಾಗಿ ನಿವೃತ್ತಿ ಆಗಿದ್ದ ಮತ್ತು  ನಾಲ್ಕು ನಕ್ಷತ್ರಗಳ ರಾಂಕ್ ತಲುಪಿದ್ದ, ಸೇನೆಯ ಅಷ್ಟೂ ಪ್ರಶಸ್ತಿಗಳನ್ನು ಆಗಲೇ ಪಡೆದಿದ್ದ, ರಾಷ್ಟ್ರಪತಿ ಅವರು ಚುಚ್ಚುವ ಅಷ್ಟೂ ಮೆಡಲ್ಲುಗಳನ್ನು ತನ್ನ ಕೋಟಿಗೆ ಚುಚ್ಚಿಸಿಕೊಂಡಿದ್ದ ಜನರಲ್ ರಾವತ್ ಈ ಹುದ್ದೆಯನ್ನು ನಿರಾಕರಿಸಿ ತನ್ನ ಕುಟುಂಬದ ಜೊತೆ  ವಿಶ್ರಾಂತಿಯನ್ನು ಪಡೆಯಬಹುದಿತ್ತು. ಆಗಲೇ ಅವರಿಗೆ 62 ವರ್ಷ ಆಗಿತ್ತು! ಆದರೆ ದೇಶಪ್ರೇಮ ಬಿಡಬೇಕಲ್ಲ! ಯಾವುದೇ ಭಾರತೀಯ ಸೈನಿಕನು ತನಗೆ ಹೊರಿಸಿದ ರಾಷ್ಟ್ರದ  ಹೊಣೆಯನ್ನು ನಿರಾಕರಣೆ ಮಾಡಲು ಸಾಧ್ಯವೇ ಇಲ್ಲ! 


ಅದರ ಹಾಗೆ 2020 ಜನವರಿ ಒಂದರಿಂದ ಭಾರತದ ಮೊತ್ತ ಮೊದಲ ಚೀಫ್ ಡಿಫೆನ್ಸ್ ಸ್ಟಾಫ್ ( CDS) ಆಗಿ ನಿಯೋಜನೆ ಆದರು. ಮೂರೂ ಸೇನೆಗಳು ಎದ್ದು ನಿಂತು ಗೌರವ ರಕ್ಷೆಯನ್ನು ನೀಡುವ ಹುದ್ದೆ ಅದು! 


ಈ ಹುದ್ದೆಗೆ ಆಯ್ಕೆ ಆದ ಕೂಡಲೇ ಭಾರತದ ಗಡಿ ಉದ್ದಕ್ಕೂ ಸಂಚಾರ ಮಾಡಿ ಬಂದರು ರಾವತ್. ಪ್ರತೀ ಒಬ್ಬ ಸೈನಿಕನ ಮಾತುಗಳನ್ನು ಬಹಳ ತಾಳ್ಮೆಯಿಂದ ಆಲಿಸಿದರು. ಸೇನೆಯ ಆಧುನಿಕತೆಗೆ ಏನೆಲ್ಲಾ ಬೇಕೋ ಅದನ್ನೆಲ್ಲ ಸರಕಾರದ ಜೊತೆ ನೇರವಾದ ಮಾತಿಗೆ ಕೂತು ತರಿಸಿಕೊಂಡರು. ಈ ವಯಸ್ಸಿನಲ್ಲಿ ಅವರು ನಡೆಸುವ ಸಂವಾದಗಳು, ಮಾಡುವ ಭಾಷಣಗಳು, ಆಡುವ ಪ್ರೇರಣೆಯ ವಾಕ್ಯಗಳು ,ರಾಷ್ಟ್ರ ಪ್ರೇಮದ ಬೆಂಕಿಯ ಘೋಷಣೆಗಳು, ಭಾರೀ ಧೈರ್ಯವಾಗಿ ಎದುರಿಸುವ ಪತ್ರಿಕಾ ಗೋಷ್ಠಿಗಳು...ಎಲ್ಲವೂ ಅದ್ಭುತ! ಅವರ ಸಿಂಹ ಗರ್ಜನೆಯ ಮಾತುಗಳನ್ನು ಕೇಳುವುದೇ ಒಂದು ಅದ್ಭುತವಾದ ಅನುಭವ. ಅವುಗಳು ಜೀವಂತ ರಾಷ್ಟ್ರಪ್ರೇಮದ ಅನ್ಯಾದೃಶ ಮಾದರಿಗಳೆ ಆಗಿವೆ. 


ಮೊನ್ನೆ ಮೊನ್ನೆ ಜನರಲ್ ರಾವತ್ ಅವರು ಹೇಳಿದ ಮಾತುಗಳು ಹೀಗಿವೆ. 


"ಭಾರತೀಯ ಸೈನ್ಯವನ್ನು ಯಾರು ಕೂಡ ಅಂಡರ್ ಎಸ್ಟಿಮೇಟ್ ಮಾಡಬೇಡಿ. ಜಗತ್ತಿನ ಯಾವ ಸೈನ್ಯವನ್ನು ಕೂಡ ನಾವು 24 ಗಂಟೆಯಲ್ಲಿ ಸೋಲಿಸಿ ಬರಬಲ್ಲೇವು. ಆದರೆ ದೇಶದ ನಾಗರಿಕರಲ್ಲಿ ನನ್ನ ಒಂದು ಪ್ರೀತಿಯ  ವಿನಂತಿ. ದಯವಿಟ್ಟು ನಮ್ಮ ಸೈನ್ಯದ ಮತ್ತು ಸೈನಿಕರ  ವಿಷಯದಲ್ಲಿ ಕೀಳಾಗಿ ಮಾತಾಡಬೇಡಿ. ಸೈನಿಕರ ಮನೋಬಲವನ್ನು ಕುಗ್ಗಿಸಬೇಡಿ. ನಮ್ಮ ಸೈನಿಕರ  ವಿಷಯದಲ್ಲಿ ದಯವಿಟ್ಟು ರಾಜಕೀಯ ತರಬೇಡಿ. ನಾವು ನಿಷ್ಠರಾಗಿ ಇರುವುದು ಭಾರತದ ದೇಶಕ್ಕೆ! ಸರಕಾರಗಳಿಗೆ ಅಲ್ಲ! ಪ್ರತೀ ಒಬ್ಬ ಸೈನಿಕನು ಕೂಡ ದೇಶಕ್ಕೆ ಬಲಿದಾನವನ್ನು ಮಾಡಲು ಹಿಂಜರಿಯುವುದೆ ಇಲ್ಲ" 


ಈ ಮಾತುಗಳು ಇನ್ನೂ ನನ್ನ ಕಿವಿಯಲ್ಲಿ ರಿಂಗಣಿಸುತ್ತ ಇರುವಾಗಲೇ ಇಂದು ಜನರಲ್ ರಾವತ್ ಅವರ ಉಸಿರು ನಿಂತು ಹೋಗಿದೆ! 


ಹಿಂದೊಮ್ಮೆ ಅವರನ್ನು ಒಬ್ಬ ಪತ್ರಕರ್ತ ಪ್ರಶ್ನೆ ಕೇಳಿದ್ದ. ಈ ಪ್ರಾಯದಲ್ಲಿ ನೀವು ಯಾಕೆ ಮತ್ತೆ ಸೈನ್ಯಕ್ಕೆ ಬಂದಿರಿ? ಎಂದು. ಅದಕ್ಕೆ ಅವರು ಕೊಟ್ಟ ಉತ್ತರ ಮಾರ್ಮಿಕವೇ  ಆಗಿತ್ತು. 


"ಪ್ರತೀ ಒಬ್ಬ ಸೈನಿಕನು ಕೂಡ ತನ್ನ ಮರಣವು ಯುದ್ದ ಭೂಮಿಯಲ್ಲಿಯೇ ಆಗಬೇಕು ಎಂದು ಬಯಸುತ್ತಾನೆ. ಅದಕ್ಕಾಗಿ ಬಂದೆ!" 


ಅವರ ಅಂತಿಮ ಆಸೆಯು ನೆರವೇರಲಿಲ್ಲ ಅನ್ನುವುದೇ ಇಂದಿನ ವರ್ಡಿಕ್ಟ್. ಅಷ್ಟರ ಮಟ್ಟಿಗೆ ವಿಧಿ ಕ್ರೂರಿ ಎಂದೇ ಹೇಳಬಹುದು! ಅಂದ ಹಾಗೆ ಈ ತಿಂಗಳ ಕೊನೆಗೆ ಅವರ ಅಧಿಕಾರದ ಅವಧಿ ಮುಗಿಯುವುದರಲ್ಲಿ ಇತ್ತು! 


ಲಾಂಗ್ ಲಿವ್ ಹಿಸ್ ಸ್ಪಿರಿಟ್ ಆಂಡ್ ಮೆಮೊರಿಸ್! ಜೈ ಹಿಂದ್! 


ಲೇಖನ - ರಾಜೇಂದ್ರ ಭಟ್ ಕೆ, ಜೇಸಿಐ ರಾಷ್ಟ್ರ ಮಟ್ಟದ ವಿಕಸನ ತರಬೇತುದಾರರು.

Leave a reply