ಅಗೋಳಿ ಮಂಜಣ - Agoli Manjanna

Webee Cafe
ಅಗೋಳಿ ಮಂಜಣ - Agoli Manjanna

ಅಗೋಳಿ ಮಂಜಣ 17 -18ನೇ ಶತಮಾನದ ಮಧ್ಯದಲ್ಲಿ ಜೀವಿಸಿದ್ದ ವೀರ ಪುರುಷ. ಮಂಗಳೂರಿನ ಸುರತ್ಕಲ್ ಗ್ರಾಮದ ಕಟ್ಲಾ ಎನ್ನುವಲ್ಲಿ
ನಾರಾಯಣಶೆಟ್ಟಿ ದುಗ್ಗು ದಂಪತಿಯ ಮಗನಾಗಿ ಹುಟ್ಟಿದವ ಮಂಜಣ್ಣ

ಸಂತಾನಹೀನ ಶೆಟ್ಟಿ ದಂಪತಿಗಳು ಬಪ್ಪನಾಡಿನ ದುರ್ಗಾಪರಮೇಶ್ವರಿಗೆ ಹರಕೆ ಸಲ್ಲಿಸಿದ ಬಳಿಕವೇ ಮಂಜಣ ಹುಟ್ಟಿದ್ದು. ಹುಟ್ಟುವಾಗಲೇ ಆನೆಯ ಮರಿಯ ಹಾಗೆ ಇದ್ದ. ಮಂಜಣ ತಂದೆ ತಾಯಿಯಂತೆಯೇ ಮಂಜಣ ದುರ್ಗೆಯ ಭಕ್ತ. ಮಂಜಣ್ಣನ ಸೋದರಮಾವ ನೆರೆಯ ಗ್ರಾಮದ ತೆ ಲಾರು ಗುತ್ತು ಎನ್ನುವಲ್ಲಿನ ಬಗ್ಗಣ ಅಡ್ಯಂತಾಯ.ಮಂಜಣ್ಣ ಹುಟ್ಟಿದ್ದು ಅಲ್ಲಿಯೇ. ಅದು ಅಲ್ಲದೆ ಅಳಿಯಸಂತಾನ ರೂಢಿಯಲ್ಲಿದ್ದು ದರಿಂದ ಮತ್ತು ಬಗ್ಗಣ ಅಡ್ಯಂತಾಯ ನಿಗೆ ಸೈನ್ಯಕ್ಕೆ ಸೇರಲು ಬುಲಾವು ಬಂದದ್ದರಿಂದ ಇಡೀ ತೆಲಾರು ಗುತ್ತು ಪ್ರದೇಶಕ್ಕೆ ಮಂಜಣ್ಣನನ್ನು ಅಧಿಪತಿಯನ್ನಾಗಿ ಮಾಡಲಾಯಿತು.

          ಮಂಜಣ್ಣ ಒಂದು ಹೊತ್ತಿಗೆ 40 ಕೆಜಿ ಅಕ್ಕಿಯ ಅನ್ನ ಉಣ್ಣುತ್ತಿದ್ದ.50 ಜನರ ಕೆಲಸ ಒಬ್ಬನೇ ಮಾಡುತ್ತಿದ್ದ. ಕೆಲವೊಮ್ಮೆ ಹದಿನಾಲ್ಕು ಸೇರು ಅವಲಕ್ಕಿ ಕೊಟ್ಟರು ಸಾಲದಾಗುತ್ತಿತ್ತು. 25 ಕೊಬ್ಬರಿಗಳನ್ನು ಜಗಿದು ನುಂಗುತ್ತಿದ್ದ. ಹಲಸಿನ ಹಣ್ಣು ಎಷ್ಟು ಕೊಟ್ಟರೂ ತಿಂದು ಮುಗಿಸುತ್ತಿದ್ದ ಮಂಜಣ್ಣ. ತೆಲಾರು ಗುತ್ತಿನ ಅಹಂಕಾರಿ ಜಟ್ಟಿ ಗಳಿಗೆಲ್ಲ ಮಣ್ಣು ಮುಕ್ಕಿಸಿದ. ಹುತ್ತಕ್ಕೆ ಕೈ ಹಾಕಿ ಹಾವುಗಳನ್ನೆಲ್ಲಾ ತಿರುಚಿದ ಸಾಹಸಿ. ಯಾವುದೇ ಸಲಕರಣೆಗಳ ಸಹಾಯವಿಲ್ಲದೆ ಅಕ್ಕಿ ಮುಡಿಯನ್ನು ಕಟ್ಟ ಬಲ್ಲವನಾಗಿದ್ದ-ಹೀಗೆ ಮಂಜಣ್ಣನ ಸಾಹಸ ತುಳುನಾಡಿನ ಎಲ್ಲೆಡೆ ಹರಡಿತ್ತು ಮಂಜಣ್ಣ ತುಳುನಾಡಿನ ಭೀಮ ಎಂದು ಹೆಸರು ಪಡೆದಿದ್ದ.

          ಎರ್ಮಾಳು ಜಾತ್ರೆಯಲ್ಲಿ ಬಲಪ್ರದರ್ಶನ ಕಾಂತಾವರದ ದೇವಸ್ಥಾನದ ಪ್ರಾಂಗಣದಲ್ಲಿ 50 ಜನರಿಗೂ ಕದಲಿಸಲು ಸಾಧ್ಯವಾಗದ ಹಾಸು ಗಲ್ಲನ್ನು ಕಿತ್ತು ಎಬ್ಬಿಸಿ ಒಬ್ಬನೇ ಅದನ್ನು ಹೊತ್ತು ತಂದು ದುರ್ಗಾಪರಮೇಶ್ವರಿಯ ಪಾದತಲದಲ್ಲಿ ಹಾಕಿ ತಾಯಿಯ ಹರಕೆಯನ್ನು ತೀರಿಸಿದ್ದು. ಅರಸು ಕಂಬಳ ನಡೆಸುತ್ತೇವೆ ಎಂದು ಹೊರಟ ಮುಲ್ಕಿಯ ಸಾಮಂತ ಅರಸ ಕಳುಹಿಸಿದ್ದ ಯುವಕರ ಜಂಬ ಮುರಿದದ್ದು. ಕಂಬಳದಲ್ಲಿ ತನ್ನ ಕೋಣ ಓಡಿಸಿ ನಿಶಾನಿಗೆ ನೀರು ಹಾಯಿಸಿ ಗೆದ್ದು ಅರಸರಿಂದ ಬಹುಮಾನ ಪಡೆದದ್ದು. 50 ಯುವಕರು ಒಟ್ಟಿಗೆ ಸೇರಿ ಕದಲಿಸಲು ಆಗದ ಕಾಡು ಸೊಪ್ಪಿನ ಕಟ್ಟನ್ನು ಒಬ್ಬನೇ ಎತ್ತಿ ಸಾಗಿಸಿದ್ದು. ಹುಲ್ಲಿನ ಕಟ್ಟಿನಲ್ಲಿ ಹಂದಿ ಮರಿಯನ್ನು ಅಡಗಿಸಿಟ್ಟು ತಂದು ತನ್ನ ಸೋದರತ್ತೆ ಬಳಿ ರೊಟ್ಟಿ ಹಂದಿ ಮಾಂಸದಡುಗೆ ಮಾಡಿ ಕೊಡೆಂದು ಹೇಳಿದ್ದು ಒಲ್ಲೆ ನೆಂದರೆ ಅತ್ತೆಗೆ ಬುದ್ಧಿ ಕಲಿಸುವ ಉಪಾಯ ಕೂಡಿದ್ದು. ತೆಂಗಿನ ಮರಗಳನ್ನು ಕೈಗಳಿಂದ ಅಲುಗಾಡಿಸಿ ಎಳನೀರು ಉದುರುವಂತೆ ಮಾಡಿ ಆನಂದಿಸಿದ್ದು. ಬೈ ಹುಲ್ಲನ್ನು ಹೊತ್ತುಕೊಂಡು ಬರಲು ಮನೆಯೊಂದಕ್ಕೆ ಹೋದಾಗ ಅವರು ಊಟ ಮಾಡುತ್ತೀಯಾ? ಎಂದು ಹೇಳಲಿಲ್ಲವೆಂದು ಸಿಟ್ಟಿನಿಂದ ಅವರ ಮನೆಯಂಗಳದಿಂದ ಕಣಜವನ್ನು ಹಿಡಿದು ಎತ್ತಿ ಸಾಗಿಸಿದ್ದು, ಜಾತ್ರೆಯಲ್ಲಿ ಕಬ್ಬಿನ ಕಟ್ಟು ಕಟ್ಟುಗಳನ್ನು ಮುರಿದದ್ದು, ಕಬ್ಬಿನ ಕಟ್ಟಿನಲ್ಲಿ ಅವನಿಗೆ ತಿಳಿಯದಂತೆ ಕಬ್ಬಿಣದ ಸಬಳವನ್ನು ಇಟ್ಟರೆ ಅದನ್ನು ಮುರಿದದ್ದು  - ಹೀಗೆ ಮಂಜಣ್ಣನ ಸಾಹಸವೇ ಸಾಹಸ.

           ಇವೆಲ್ಲವೂ ಉಪಟಳಕ್ಕಾಗಿ ಹುಡುಗು ಬುದ್ಧಿಯಿಂದ ಮಾಡಿದ್ದಲ್ಲ. 'ಪವರ್ ಹೌಸ್'  ಆಗಿದ್ದ ಕಾಯಕ್ಕೆ  ಕಾ ಯಕ ಕೊಡಲು ಸುಡುಗಾಡಿನಂತೆ ಇದ್ದ ಊರನ್ನು ಸುಭಿಕ್ಷವಾಗಿಸಿದ್ದು ಮಂಜಣ್ಣ. ಗುಡ್ಡ-ಬೆಟ್ಟ ಕಡಿದು ಹೊಲ ಗದ್ದೆಗಳನ್ನು ಮಾಡಿ ಬೆವರು ಹರಿಸಿ ದುಡಿದು ಎಲ್ಲರ ಮನೆಗಳ ಅಟ್ಟದಲ್ಲಿ ಅಟ್ಟದಲ್ಲಿ ರಾಶಿರಾಶಿ ಅಕ್ಕಿಮುಡಿ ಪೇರಿಸಿಟ್ಟವ. ಮಂಜಣ್ಣ ಸತ್ಯಮಾರ್ಗದಲ್ಲಿ ನಡೆದವನು. ಮಂಜಣ್ಣ ಅನಾವಶ್ಯಕ ಕಾಲು ಕೆರೆದು ಜಗಳ ಮಾಡಿದವನಲ್ಲ. ಒಮ್ಮೊಮ್ಮೆ ಯಾರಾದರೂ ಕೆಣಕಿದರೆ ಗತಿಯೇನು ಎಂಬುದನ್ನು ಕಾಳಗದ ಮೊದಲೇ ಊಹಿಸಬಹುದಾಗಿತ್ತು. ಮಂಜಣ್ಣನ ಕಥೆಯನ್ನು ಅಜ್ಜ-ಅಜ್ಜಿ ಹೇಳುವಾಗ ಮಕ್ಕಳಿಗೆಲ್ಲ ಸಂತೋಷ ಯುವಕರಿಗೆ ಸ್ಪೂರ್ತಿ.

        ಇಂತಹ ಧೀರ ಮಂಜಣ್ಣನ ಅವಸಾನ ಹೇಗಾಯ್ತು ಎಂಬ ಕುತೂಹಲ ಇರಬಹುದು. ಮಂಜಣ್ಣನ ಪರಾಕ್ರಮವನ್ನು ನೋಡಿ ಮತ್ಸರದಿಂದ ಕುದಿಯುತ್ತಿದ್ದ ಸಮಕಾಲೀನ ಯುವಕರ ಗುಂಪೊಂದು ಮೋಸ ಮಾಡಿ ಮಂಜಣ್ಣನನ್ನು ಸುಮ್ಮನೆ ಔತಣ ಬಡಿಸುತ್ತೇವೆ ಎಂದು ಆಹ್ವಾನಿಸಿತು. ಹುಣ್ಣಿಮೆಯ ಮುಸ್ಸಂಜೆಯಲ್ಲಿ ನಿಗದಿತ ಸಮಯಕ್ಕೆ ಅವನು ಬರುತ್ತಿದ್ದಾಗ ಮರೆಯಲ್ಲಿ ನಿಂದು ಈ ಯುವಕರು ಮಂಜಣ್ಣನ ಮೇಲೆ ಒಂದರ ಮೇಲೊಂದರಂತೆ ಬಾಣಗಳ ಸುರಿಮಳೆ ಮಾಡಿ ದಾರುಣ ಹತ್ಯೆಗೈದರು.  ಪರಾಕ್ರಮಿ ಒಬ್ಬನಿಗೆ ಈ ರೀತಿ ಅವಸಾನ ಅವನೊಬ್ಬ ಐತಿಹಾಸಿಕ ಪುರುಷನೇ ಆಗಿದ್ದರೂ ಅವನ ಮೇಲೆ ಹೆಚ್ಚಿನ ಕನಿಕರ ಮೂಡಿಸುತ್ತದೆ.

     ಆಗೊಳಿ ಮಂಜಣ್ಣನಿಗೆ ತಾಯಿಯ ಮೇಲೆ ಇದ್ದ ಪ್ರೀತಿ ಮತ್ತು ತಿಂಡಿಯ ಮೇಲೆ ಇದ್ದ ಪ್ರೀತಿಗೆ ಅವನ ಈ ಮಾತು ಸಾಕ್ಷಿ -ಕಾರ್ಕಳದ ಬಾಕಿಮಾರು ಗದ್ದೆ ಬಟ್ಟಲು ಆಗಬೇಕು. ಕೊಡಂಜಿ ಕಲ್ಲು ಕಡುಬು ಆಗಬೇಕು.ರಾಮಸಮುದ್ರದ ನೀರು ಹಾಲು ಆಗಬೇಕು.ಅಮ್ಮ ದುಗ್ಗು ಬಡಿಸಬೇಕು.ಮಂಜಣ್ಣ ನಾನು ಒಬ್ಬನೇ ಉಣ್ಣಬೇಕು.

     ಅಗೋಳಿ ಮಂಜಣ್ಣ ಸಾಹಸಿ ದೈವಭಕ್ತ,ವೀರ ಪುರುಷ ಮಕ್ಕಳಿಗೆ ಆಶ್ಚರ್ಯ. ಯುವಕರಿಗೆ ಪ್ರೇರಣೆ.

Leave a reply