ಯಾಕೆ ಗಣೇಶ ಎಂದರೆ ಎಲ್ಲರಿಗೂ ಇಷ್ಟ ಮತ್ತು ಹತ್ತಿರವಾದ ದೇವರು? ಆಚರಣೆಯ ವೈಶಿಷ್ಟ್ಯ ಗಳೇನು?

Bharathraj Talthaje
Why is Lord ganesha close to everyone and features of the celebration

ಗಣೇಶ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಪುಟಾಣಿಗಳಿಂದ ಹಿಡಿದು ವೃದ್ಧರವರೆಗೆ ಗಣಪತಿ ಎಂದರೆ ತುಂಬಾ ಅಚ್ಚುಮೆಚ್ಚಿನ ದೇವರು. ಇದಕ್ಕೆ ಕಾರಣ ಅವನ ಸ್ವರೂಪವೋ ಅಥವಾ ಶಕ್ತಿಯೋ ಎಂದು ತಿಳಿಯದು. ಯಾವುದೇ ಹಬ್ಬ ಹರಿದಿನಗಳಿರಲಿ ಪೂಜೆ ಪುನಸ್ಕಾರಗಳಿರಲಿ ಎಲ್ಲರೂ ಮೊದಲು ನೆನೆಯುವುದು ವಿಘ್ನ ವಿನಾಶಕ ವಿನಾಯಕನನ್ನು. ಮೊದಲು ಗಣಪತಿಗೆ ಪೂಜೆ ನಡೆಯದೆ ಬೇರೆ ಯಾವುದೇ ಪೂಜೆಯಾಗಲಿ, ಎಷ್ಟೇ ದೊಡ್ಡ ಯಾಗವಾಗಲಿ ಅದು ಪೂರ್ಣಗೊಳ್ಳುವುದಿಲ್ಲ.


ಯಾಕೆ ಗಣೇಶನಿಗೆ ಮೊದಲ ಪೂಜೆ?
ಪುರಾಣದಲ್ಲಿ ಬರುವ ಅನೇಕ ಕತೆಗಳು, ಘಟನೆಗಳು ಮತ್ತು ಅವನು ಮಾಡಿದ ಚಮತ್ಕಾರಗಳು ನೋಡಿದರೆ ಅದೂ ಕೂಡ ಕಾರಣವಾಗಿರಬಹುದು.
ಆದರೆ ನನ್ನ ಹಿರಿಯರು ಹೇಳಿರುವ ಮುಖ್ಯವಾದ ಎರಡು ಕಥೆಗಳಿವೆ.

ಒಂದು ಕತೆಯ ಪ್ರಕಾರ, ಶಿವನ ಪತ್ನಿ ಪಾರ್ವತಿ ಕೈಲಾಸದಲ್ಲಿ ಸ್ನಾನಕ್ಕೆ ಹೋಗುವಾಗ ಗಣೇಶನ ಬಳಿ ತನ್ನ ಅಂತಃಪುರದ ಎದುರು ಕಾವಲು ಕಾಯಬೇಕೆಂದು ಆದೇಶಿಸುತ್ತಾಳೆ. ನಾನು ಸ್ನಾನ ಮಾಡಿ ಬರುವವರೆಗೂ ಯಾರನ್ನೂ ಒಳಗೆ ಬಿಡಬೇಡ ಎಂದು ತಿಳಿಸಿರುತ್ತಾಳೆ. ಆಗ ತಾಯಿ ಪಾರ್ವತಿಯ ಆದೇಶದಂತೆ ಕಾವಲು ಕಾಯಲು ನಿಂತ ಗಣೇಶ ಯಾರೂ ಒಳಗೆ ಹೋಗದಂತೆ ನೋಡಿಕೊಳ್ಳುತ್ತಿರುತ್ತಾನೆ. ಆಗ ಅಲ್ಲಿಗೆ ಶಿವ ಬರುತ್ತಾನೆ. ಶಿವ ಯಾರೆಂದು ತಿಳಿಯದ ಗಣೇಶ ನನ್ನ ತಾಯಿ ಯಾರನ್ನೂ ಒಳಗೆ ಬಿಡಬಾರದು ಎಂದು ಆದೇಶಿಸಿದ್ದಾಳೆ. ಆಕೆ ಹೇಳುವವರೆಗೂ ನೀವು ಒಳಗೆ ಹೋಗುವಂತಿಲ್ಲ ಎಂದು ಅಡ್ಡ ನಿಲ್ಲುತ್ತಾನೆ. ಇದರಿಂದ ಕೋಪಗೊಂಡ ಮಹಾದೇವ ಗಣೇಶನ ತಲೆಯನ್ನೇ ಕತ್ತರಿಸುತ್ತಾನೆ. ಸ್ನಾನ ಮುಗಿಸಿ ಹೊರಗೆ ಬಂದ ಪಾರ್ವತಿ ತನ್ನ ಮಗ ಗಣೇಶ ಸತ್ತು ಬಿದ್ದಿರುವುದನ್ನು ನೋಡಿ ಕೋಪಗೊಳ್ಳುತ್ತಾಳೆ. ಆಕೆಯ ಕೋಪಕ್ಕೆ ಇಡೀ ಭೂಮಂಡಲವೇ ನಡುಗುತ್ತದೆ. ಹೇಗಾದರೂ ಮಾಡಿ ನನ್ನ ಮಗನನ್ನು ಬದುಕಿಸಲೇಬೇಕೆಂದು ಆಕೆ ಮಹಾದೇವನ ಬಳಿ ಪಟ್ಟು ಹಿಡಿಯುತ್ತಾಳೆ. ನನ್ನ ಮಗ ಬದುಕದಿದ್ದರೆ ಇಡೀ ಭೂಮಂಡಲವನ್ನೇ ನಾಶ ಮಾಡುವುದಾಗಿ ಎಚ್ಚರಿಸುತ್ತಾಳೆ.
ಇದರಿಂದ ಭಯಭೀತಗೊಂಡ ದೇವಾನುದೇವತೆಗಳು ಕೂಡ ಗಣೇಶನ ತಲೆಯನ್ನು ಜೋಡಿಸಲು ಪ್ರಯತ್ನ ಮಾಡುತ್ತಾರೆ. ಬಳಿಕ ಮಹಾದೇವ ಆನೆಯ ತಲೆಯನ್ನು ತಂದು ಗಣಪತಿಗೆ ಜೋಡಿಸಿ, ಬದುಕಿಸುತ್ತಾನೆ. ತನ್ನ ತಾಯಿಗೆ ನೀಡಿದ ಮಾತಿಗಾಗಿ ಪ್ರಾಣವನ್ನೇ ಕೊಡಲು ಸಿದ್ಧನಾದ ಗಣೇಶನನ್ನು ಎಲ್ಲ ದೇವರಿಗಿಂತ ಮೊದಲು ಪೂಜಿಸಬೇಕೆಂದು ಮಹದೇವ ಆಶೀರ್ವದಿಸುತ್ತಾನೆ.

ಎರಡನೇ ಕತೆಯ ಪ್ರಕಾರ, ಗಣಪತಿ ಹಾಗೂ ಆತನ ಅಣ್ಣ ಸುಬ್ರಹ್ಮಣ್ಯನ ನಡುವೆ ಸ್ಪರ್ಧೆ ಏರ್ಪಡುತ್ತದೆ. ಆ ಸ್ಪರ್ಧೆಯಲ್ಲಿ ಶಿವ ಮತ್ತು ಪಾರ್ವತಿ ತಮ್ಮ ಮಕ್ಕಳಿಗೆ ಇಡೀ ಪ್ರಪಂಚವನ್ನು ಸುತ್ತಿ ಬರಲು ಸೂಚಿಸುತ್ತಾರೆ. ಹಾಗೇ, ಯಾರು ಮೊದಲು ಜಗತ್ತನ್ನು ಸುತ್ತಿ ಬರುತ್ತಾರೋ ಅವರು ಈ ಸ್ಪರ್ಧೆಯಲ್ಲಿ ಗೆಲ್ಲುತ್ತಾರೆ ಎಂದು ಹೇಳುತ್ತಾರೆ. ಮೂಷಿಕವಾಹನನಾದ ಗಣೇಶ ಹೇಗೂ ಈ ಸ್ಪರ್ಧೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ಸುಬ್ರಹ್ಮಣ್ಯ ತನ್ನ ವಾಹನವಾದ ನವಿಲನ್ನು ಏರಿ ವಿಶ್ವ ಪರ್ಯಟನೆಗೆ ತೆರಳುತ್ತಾನೆ. ಆದರೆ, ಗಣಪತಿ ತನ್ನ ತಂದೆ-ತಾಯಿಯರಾದ ಶಿವ ಹಾಗೂ ಪಾರ್ವತಿಯ ಸುತ್ತ ಸುತ್ತುತ್ತಾನೆ. ನೀವೇ ನನ್ನ ಪ್ರಪಂಚ ಎಂದು ಹೇಳುವ ಗಣಪತಿಯ ಬುದ್ಧಿವಂತಿಕೆ ಹಾಗೂ ಪೋಷಕರ ಬಗೆಗಿನ ಪ್ರೀತಿಯನ್ನು ಮೆಚ್ಚಿ ಆತನನ್ನೇ ಸ್ಪರ್ಧೆಯ ವಿಜೇತನೆಂದು ಘೋಷಿಸಲಾಗುತ್ತದೆ. ಇದೂ ಕೂಡ ಗಣಪತಿಯನ್ನು ಮೊದಲು ಪೂಜಿಸಲು ಕಾರಣವಾಗಿದೆ.

ತಂದೆತಾಯಿಯ ಸ್ಥಾನ ಎಂತಹುದು ಎಂದು ಜಗತ್ತಿಗೆ ಸಾರಿದವನು ಗಣಪ. ವಿದ್ಯೆ, ಬುದ್ದಿ ಮತ್ತು ಸಂಸ್ಕಾರದ ಸಂಕೇತ ಗಣಪ. ಅದಕ್ಕೆ ಅವನನ್ನು ವಿದ್ಯಾ ವಿನಾಯಕ, ಸಿದ್ಧಿ ವಿನಾಯಕ, ಬುದ್ಧಿ ವಿನಾಯಕ ಎಂದು ಕರೆಯಲಾಗುತ್ತದೆ.

ಯಾಕೆ ಎಲ್ಲರಿಗೂ ಹತ್ತಿರವಾದ ದೇವರು?
ಗಣೇಶನನ್ನು ಪೂಜಿಸುವುದು ಮತ್ತು ಮೆಚ್ಚಿಸಿಕೊಳ್ಳುವುದು ಅತ್ಯಂತ ಸುಲಭ. ಯಾರೇ ನೆನೆದರು ಓ ಎನ್ನುತ್ತಾನೆ. ನಾವು ಚಿಕ್ಕ ವಯಸ್ಸಿನಲ್ಲಂತೂ ಎಷ್ಟು ಬಾರಿ ಗಣೇಶನ ಮೂರ್ತಿ ಮಾಡಿ ಆಟವಾಡಿದ್ದೇವೋ ಆ ಗಣಪತಿಗೇ ಗೊತ್ತು. ಹೀಗೆ ಮಕ್ಕಳು ಆಟವಾಡಿ ಆಟವಾಡಿಯೇ ಸೌತಡ್ಕ ದೇವಸ್ಥಾನವೇ ಉಂಟಾಯಿತಂತೆ. ಮಕ್ಕಳ ಕೂಗಿಗೆ ಒಡಿ ಬಂದ ಗಣಪ ಎಂದು ಅನೇಕರು ಹೇಳುತ್ತಾರೆ.
ಅದಲ್ಲದೇ ಭಕ್ತರ ಭಜನೆಗೆ ಮೆಚ್ಚಿ ಮಧೂರಿನಲ್ಲಿ ಗಣೇಶ ಉದ್ಭವಗೊಂಡನಂತೆ.

Leave a reply