ಜಲಿಯನ್​ ವಾಲಾಬಾಗ್​ ಹತ್ಯಾಕಾಂಡ: ಕರಾಳ ನೆನಪು jalian wala bhag hatyakand:The darkest memory

Collected: Mitthu Samraat
ಜಲಿಯನ್​ ವಾಲಾಬಾಗ್​ ಹತ್ಯಾಕಾಂಡ, Jallianwala Bagh hatyakand : the darkest memory

ಭಾರತದ ಸ್ವಾತಂತ್ರ್ಯ ಹೋರಾಟದ ದಿನಗಳಲ್ಲಿ ಜರುಗಿದ ಎಂದಿಗೂ ಮರೆಯಲಾಗದ ಇತಿಹಾಸ ಎಂದರೆ ಜಲಿಯನ್​ ವಾಲಾಬಾಗ್​ ಹತ್ಯಾಕಾಂಡ.1919ರ ಏಪ್ರಿಲ್ 13ರಂದು ಪಂಜಾಬ್​ನ ಅಮೃತಸರದ ಜಲಿಯನ್ ವಾಲಾ ಬಾಗ್ ಪ್ರದೇಶದಲ್ಲಿ ಬ್ರಿಟಿಷರ ಗುಂಡಿನ ದಾಳಿಗೆ ನೂರಾರು ಅಮಾಯಕ ಜನರು ಬಲಿಯಾಗಿದ್ದರು.ಭಾರತೀಯ ಕ್ರಾಂತಿಕಾರಿಗಳು ಮತ್ತು ಹತ್ಯಾಕಾಂಡದಲ್ಲಿ ಪ್ರಾಣ ಕಳೆದುಕೊಂಡ ಜನರಿಗೆ ಗೌರವ ಸೂಚಿಸುವ ಸಲುವಾಗಿ 1951ರಲ್ಲಿ ಭಾರತ ಸರ್ಕಾರ ಸ್ಮಾರಕ ಸ್ಥಾಪಿಸಿತು. ಇದು ಹೋರಾಟ ಮತ್ತು ತ್ಯಾಗದ ಸಂಕೇತವಾಗಿದ್ದು, ಯುವಜನತೆಯಲ್ಲಿ ದೇಶಪ್ರೇಮವನ್ನು ಹುಟ್ಟುಹಾಕುತ್ತಿದೆ. ಘಟನೆಯ ನೆನಪಿನಲ್ಲಿ 'ಯಾಡ್-ಇ-ಜಲಿಯನ್' ಎಂಬ ವಸ್ತು ಸಂಗ್ರಹಾಲಯವನ್ನೂ ಸ್ಥಾಪಿಸಲಾಗಿದೆ.

ಹಾಗಾದರೆ ಅಂದು ನಡೆದಿದ್ದೇನು?
1919ರ ಮಾರ್ಚ್ 10 ರಂದು ಬ್ರಿಟಿಷರು ಜಾರಿಗೆ ತಂದ ರೌಲಟ್ ಕಾಯ್ದೆ ವಿರುದ್ಧ ರಾಷ್ಟ್ರವ್ಯಾಪಿ ಆಕ್ರೋಶ ವ್ಯಕ್ತವಾಗಿತ್ತು. ಮಹಾತ್ಮ ಗಾಂಧಿ ಇದನ್ನು ವಿರೋಧಿಸಿ ಸತ್ಯಾಗ್ರಹ ಪ್ರಾರಂಭಿಸಿದರು. ಏಕೆಂದರೆ ಈ ಕಾಯ್ದೆ ಅಡಿ ಯಾವುದೇ ವ್ಯಕ್ತಿಯನ್ನು ಯಾವುದೇ ಸಮಯದಲ್ಲಿ ದೇಶದ್ರೋಹದ ಅಡಿಯಲ್ಲಿ ಬಂಧಿಸಲು ಬ್ರಿಟಿಷ್​ ಸರ್ಕಾರಕ್ಕೆ ಅಧಿಕಾರ ನೀಡಲಾಗಿತ್ತು. ಅದೇ ವರ್ಷ ಏಪ್ರಿಲ್ 7 ರಂದು ಗಾಂಧೀಜಿ ರೌಲಟ್ ಕಾಯ್ದೆಯನ್ನು ವಿರೋಧಿಸುವ ಮಾರ್ಗಗಳನ್ನು ವಿವರಿಸುವ 'ಸತ್ಯಾಗ್ರಹಿ' ಎಂಬ ಲೇಖನವನ್ನು ಪ್ರಕಟಿಸಿದ್ದರು.
ಸಿಖ್ಖರ ಪವಿತ್ರ ದಿನಗಳಲ್ಲೊಂದಾದ ಬೈಸಾಖಿ ಹಬ್ಬದ ದಿನ ಏಪ್ರಿಲ್ 13 ರಂದು ಕಾಯ್ದೆ ವಿರೋಧಿಸಿ ಸಭೆ ನಡೆಸಲು ಜಲಿಯನ್​ ವಾಲಾಬಾಗ್ ಮೈದಾನದಲ್ಲಿ ಸಹಸ್ರಾರು ಮಂದಿ ಭಾರತೀಯರು, ಹೆಚ್ಚಾಗಿ ಪಂಜಾಬ್​ನ ಜನರು ನೆರೆದಿದ್ದರು. ಪ್ರತಿವರ್ಷ ಈ ಹಬ್ಬ ಆಚರಿಸಲು ಜನರು ಇಲ್ಲಿ ಬಂದು ಸೇರುತ್ತಾರೆ. ಆದರೆ, ಬ್ರಿಟಿಷರ ಹೊಸ ಮಾರ್ಷಲ್​ ನಿಯಮದಂತೆ ಆ ವೇಳೆ ಐದಕ್ಕಿಂತ ಹೆಚ್ಚು ಜನರು ಸೇರುವಂತಿರಲಿಲ್ಲ. ಆದರೆ ಈ ಮಾಹಿತಿ ಜನರಿಗೆ ಲಭ್ಯವಾಗಿರಲಿಲ್ಲ. ನಿಯಮ ಉಲ್ಲಂಘನೆಯ ನೆಪದಲ್ಲಿ ಬ್ರಿಟಿಷ್​ ಜನರಲ್ ಡೈಯರ್ ಜನಸಮೂಹದ ಮೇಲೆ ಗೋಲಿಬಾರ್​ ನಡೆಸಲು ಆದೇಶ ನೀಡಿದರು. ಘಟನೆಯಲ್ಲಿ ನೂರಾರು ಮಂದಿ ಸಾವನ್ನಪ್ಪಿದ್ದರೆ, ನೂರಾರು ಮಂದಿ ಗಾಯಗೊಂಡಿದ್ದರು. ಕೆಲ ಮೂಲಗಳ ಪ್ರಕಾರ ಸಾವಿಗೀಡಾದವರ ಸಂಖ್ಯೆ 379. ಇನ್ನು ಕೆಲ ಮೂಲಗಳ ಪ್ರಕಾರ ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, 1200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತದೆ. 2019ರಲ್ಲಿ ಬ್ರಿಟನ್ ಪ್ರಧಾನಿ ಥೆರೆಸಾ ಮೇ ಅವರೇ ಹತ್ಯಾಕಾಂಡಕ್ಕೆ ವಿಷಾದ ವ್ಯಕ್ತಪಡಿಸಿದ್ದರು. ಕ್ಷಮೆಯಾಚಿಸದಿದ್ದರೂ, ಇದೊಂದು 'ನಾಚಿಕೆಗೇಡಿನ ಸಂಗತಿ' ಎಂದು ಹೇಳಿದ್ದರು.

Leave a reply